Sunday, February 28, 2016



ಇದು  ನನ್ನದಲ್ಲದ ಪ್ರಪಂಚ 
ಎಂದೂ  ನನ್ನದೆನಿಸದ  ಬದುಕು 
ಇಲ್ಲಿ ಎಲ್ಲವೂ ಮೀರಬಾರದ ಎಲ್ಲೇ
 ಮತ್ತು  ನಿರಾಕರಿಸಲಾಗದ ಹಣೆಬರಹ 
ಬದಲಿಸುವವರಾರು ?
ಎಲ್ಲಾ ನೋವನ್ನೂ ಹಂಚಲಾಗದಿಲ್ಲಿ 
ನಮಗದು ಸ್ವಯಾರ್ಜಿತ 
ನಾವೇ ಸೃಷ್ಟಿಸಿದ ಸಮಸ್ಯೆಗಳಿಗೆ 
ನಾವಷ್ಟೇ ಆಗಬಲ್ಲೆವು ಪರಿಹಾರ 
ಗಮ್ಯ ತಿಳಿಯದೆ ಸಾಗುತಿದೆ 
ಬಾಳ ಹಾದಿಯಲಿ ಹೆಜ್ಜೆಗಳು 
ಇದು ನನಾ ದಾಟಬಾರದ ಪರಿಧಿ 
ಯಾರದ್ದೋ ಪರಭಾರೆಗೆ ಬಲಿಯಾಗಿ 
ಕಳಕೊಂಡಿದ್ದು ತನ್ನತನ 
ಭಾವುಕತೆ ವರವೋ  ಶಾಪವೋ 
ಹುಡುಕಿದರೂ ಉತ್ತರ ಸಿಗುತ್ತಿಲ್ಲ 
ಮುಚ್ಚಿದ ಬಾಗಿಲ ಹಿಂದೆ ಬಹುಶಃ 
ತೆರೆದಿಡಲಾಗದ ನೋವಿಹುದೇನೋ 
ಮೌನ ಸಂಭಾಷಣೆಗೆ ಅನುವಾದಕರಿಲ್ಲ 
ನೋವಿಲ್ಲದೆ ಒಲವು ಸಿಗದಿಲ್ಲಿ
 ಕಳೆದುಕೊಂಡವರ ಬದುಕೆಂದರೆ...  
ಬರೀ ನೆನಪುಗಳಷ್ಟೇ ತಾನೇ 
ಅದಕ್ಕೇನು ? ನೆನಪಲ್ಲೇ ಬದುಕಿದರಾಯ್ತು ... 

Monday, January 18, 2016

                                            ಊರ್ಮಿಳಾ 
      

             ರಾಮಾಯಣ ಹಲವು ವೈರುಧ್ಯಗಳ  ಕೃತಿ . ಜಗತ್ತಿಗೆ ಜೀವನ ಮೌಲ್ಯಗಳನ್ನ ಕೊಡುಗೆ ನೀಡಿದ ರಾಮಾಯಣ ಇಂದಿಗೂ ಸರ್ವ ಕಾಲಿಕ ಶ್ರೇಷ್ಠ  ಕೃತಿ ಎನಿಸಿಕೊಂಡಿದೆ . ಹಾಗಾಗಿಯೇ ವಾಲ್ಮೀಕಿ ರಾಮಾಯಣ , ಆಧ್ಯಾತ್ಮ ರಾಮಾಯಣ, ಆನಂದ ರಾಮಾಯಣ ಹೀಗೆ ಅನೇಕ ಸ್ವರೂಪಗಳಲ್ಲಿ ರಾಮಾಯಣ ದಾಖಲಾಗಿದೆ . ಕೇವಲ ಹಿಂದುಗಳಷ್ಟೇ ಅಲ್ಲದೆ ಬೌದ್ಧರೂ ಜೈನರೂ ಈ ಶ್ರೇಷ್ಠ ಕೃತಿಯನ್ನು ತಮಗೆ ಇಷ್ಟವಾದ ರೀತಿಯಲ್ಲಿ ಬಳಸಿಕೊಂಡಿದ್ದಾರೆ , ಅಳವಡಿಸಿಕೊಂಡಿದ್ದಾರೆ . ಬಹುಶಃ ತೀರಾ ವಿಸ್ತೃತವಾಗಿ ಅಲ್ಲದೆ ಹೋದರೂ ಸಂಕ್ಷಿಪ್ತವಾಗಿ ದಶರಥ , ಮಂಥರೆ , ರಾಮ , ಲಕ್ಷ್ಮಣ , ಸೀತೆ , ಹನುಮ , ರಾವಣರನ್ನ ಒಳಗೊಂಡ ರಾಮಾಯಣದ ಕತೆ ಪ್ರತಿಯೊಬ್ಬರಿಗೂ ಗೊತ್ತಿರುವ ಪುರಾಣ ಕತೆ .   

              ನಿಜ , ರಾಮಾಯಣ ಅನೇಕ ಆದರ್ಶಗಳನ್ನ ಕಟ್ಟಿಕೊಟ್ಟ ಅಪರೂಪದ ಕೃತಿ . ರಾಮಾಯಣ ನಮಗೆ ಪಿತೃ  ವಾಕ್ಯ ಪರಿಪಾಲನೆಯ ಮೌಲ್ಯವನ್ನ ರಾಮನಿಂದ ನೀಡಿದೆ . ಲಕ್ಷ್ಮಣ ಇವತ್ತಿಗೂ ಭಾರತೀಯ ಜನಮಾನಸದಲ್ಲಿ ಭಾತೃ ಪ್ರೇಮಕ್ಕೆ  ಅಳಿಸಲಾಗದ ಉದಾಹರಣೆ . ಸತಿಧರ್ಮ ಎಂದರೇನೆಂದು ತಿಳಿಸಲು ಹಿರಿಯರು ನೆನೆಸಿಕೊಳ್ಳೋ ಮೊದಲ ಹೆಸರೇ ಸೀತಾ ಮಾತೆ . ಸ್ವಾಮಿ ಭಕ್ತಿಯ ಶ್ರೇಷ್ಠತೆಗೆ  ಹನುಮನಿಗಿಂತ ಬೇರೆ ನಿದರ್ಶನವೇ ಇಲ್ಲ . ಅಷ್ಟೇಕೆ ಇಡೀ ಪ್ರಸಂಗದುದ್ದಕ್ಕೂ ಖಳನಾಯಕನಾಗಿಯೇ ಕಾಡಿ ಕೊನೆಗಂಡ ರಾವಣನಲ್ಲೂ ಒಳ್ಳೆಯತನ ಹುಡುಕಿ ಮುಗಿಯುತ್ತದೆ ರಾಮಾಯಣ ಅನ್ನೋ ವಾಲ್ಮೀಕಿ ಕೃತಿ . 

        
        ಇಷ್ಟೆಲ್ಲಾ ಬರೆದ ವಾಲ್ಮೀಕಿ ಊರ್ಮಿಳೆಯನ್ನೇಕೆ ಮರೆತ  ಗೊತ್ತಿಲ್ಲ . ರಾಮಾಯಣದಲ್ಲಿ ಊರ್ಮಿಳೆಯ ಪ್ರವೇಶ ಯಾವಾಗ ಹೇಗಾಗುತ್ತೆ ನನಗಷ್ಟು ಸ್ಪಷ್ಟವಾಗಿ ಗೊತ್ತಿಲ್ಲ . ಆದರೆ ರಾಮನ ದೌರ್ಭಾಗ್ಯದ ನಿಮಿತ್ತ ಊರ್ಮಿಳೆ ತನ್ನ ಬದುಕನ್ನ ಕಳೆದುಕೊಂಡದ್ದು ಮಾತ್ರ ಅರ್ಥವಾಗಿದೆ . ಅಷ್ಟಕ್ಕೂ ಉರ್ಮಿಳೆಯ ಚಿತ್ರಣ ಸಿಕ್ಕಿದ್ದು ಮೂರ್ನಾಲ್ಕು ಬಾರಿ ಬಂದು ಬಂದು ಹೋಗೋ ಮೂರಕ್ಷರದ ಹೆಸರಾಗಿ ಅಷ್ಟೇ . ಆದರೂ ಇವತ್ತಿಗೂ ಊರ್ಮಿಳೆಯ ಪಾತ್ರ ರಾಮನಿಗಿಂತಲೂ , ಸೀತೆಗಿಂತಲೂ ಹೆಚ್ಚು ಆಳವಾಗಿ ಮನಸಲ್ಲಿದೆ . 

                  ಜಗತ್ತಿಗೆ ಸೀತೆ ಗೊತ್ತು , ಆದರೆ ಊರ್ಮಿಳೆ ? ಊಹುಂ ! ಲಕ್ಷ್ಮಣ ಗೊತ್ತು , ಅವನ ಹೆಂಡತಿ ? ನಮಗೆಲ್ಲ ರಾಮನ ಹಿಂದೆ ಕಾಡಿಗೆ ಹೋದ ಸೀತೆಯ ತ್ಯಾಗ ಅಗತ್ಯಕ್ಕಿಂತ ಜಾಸ್ತಿಯೇ ಗೊತ್ತು  . ಆದರೆ ಅರಮನೆಯಲ್ಲಿದ್ದೂ ವನಸುಮದಂತೆ ಬದುಕು ಕಳೆದ ಊರ್ಮಿಳೆ ಬಗ್ಗೆ ಏನೂ ಗೊತ್ತಿಲ್ಲ . ಅಷ್ಟಕ್ಕೂ ಊರ್ಮಿಳೆ ಯಾಕೆ ನಿರ್ಲಕ್ಷ್ಯಕ್ಕೊಳಗಾದಳು ? ಲಕ್ಷ್ಮಣನಿಲ್ಲದ ಊರ್ಮಿಳೆ ಬಗ್ಗೆ ಬರೆಯೂದೇನೆಂಬ ತಾತ್ಸಾರವೇ  ?  ಅಥವಾ ಸೀತಾ ರಾಮರ ವರ್ಣನೆಗೆ ಪದಗಳೆಲ್ಲಾ ಮೀಸಲಾದವೇ ? ಗೊತ್ತಿಲ್ಲ. ನನಗೇಕೋ ಅವಳು ವಾಲ್ಮೀಕಿಗೆ ಒಲಿಯದೆ ಉಳಿದ ಅಧ್ಯಾಯ ಅನ್ನಿಸುತ್ತಾಳೆ . ಮಾತು ಕೊಟ್ಟವನು ದಶರಥ , ಪಡೆದವಳು ಕೈಕೇಯಿ , ನಡೆಸಿಕೊಟ್ಟವ ರಾಮ . ನಡುವಲ್ಲಿ ನೊಂದು ನರಳಿದವಳು ಊರ್ಮಿಳೆ . ಹದಿನಾಲ್ಕು ವರ್ಷ ಅನ್ನೋದು ಸಣ್ಣ ಅವಧಿ ಏನಲ್ಲ . ಅದರೂ ಕೂಡ ಊರ್ಮಿಳೆಯ ದೌರ್ಭಗ್ಯಕ್ಕೊಂದೆರಡು ಪುಟ ಆ ಬೃಹತ್ ಗ್ರಂಥದಲ್ಲಿ ಸಿಗದೇ ಹೋಯಿತು . ಆ ವಿರಹಿಣಿಯ ದುರಂತ ಅಧ್ಯಾಯ ರಾಮಾಯಣದಲ್ಲಿ ದಾಖಗುವುದೇ ಇಲ್ಲ  . 

                    ನಿಜ , ಊರ್ಮಿಳೆಯದ್ದು ಲೋಕ ಮರೆತ ತ್ಯಾಗ . ಕೆಲ ವರ್ಷಗಳ ಹಿಂದೆ  'ಊರ್ಮಿಳೆ' ಕವಿತೆ ಬರೆದಾಗ ಹೆಚ್ಚಿನವರು  ಕೇಳಿದ್ದಿದೆ  'ಯಾರಿದು ಊರ್ಮಿಳೆ'  .  ಯಾಕೆಂದರೆ ಸೀತೆಗಾಗಿ ಮರುಗುವುದರಲ್ಲೇ  ಮುಳುಗಿದ್ದವರು  ನಾವು , ನಮಗೆ ಊರ್ಮಿಳೆಯ ಕಣ್ಣೀರು ಕಾಣಿಸಲಿಲ್ಲ .  ರಾಮನ ಹಿಂಬಾಲಿಸಿ ಲಕ್ಷ್ಮಣನ ಹೆಜ್ಜೆ ಸದ್ದು ಆಲಿಸುವುದರಲ್ಲೇ ಮಗ್ನರಾಗಿದ್ದ ನಮಗೆ ಅವನಿಲ್ಲದ ಅರಮನೆಯಲ್ಲಿಊರ್ಮಿಳೆ  ಬಿಕ್ಕುತ್ತಿದ್ದದ್ದು ಕೇಳಿಸಲೇ ಇಲ್ಲ . ಅದೇಕೋ ವಾಲ್ಮೀಕಿ ರಾಮಾಯಣ ಎಂದರೆ ರಾಮ ಸೀತೆ ಅಷ್ಟೇ ಎಂಬಂತೆ ಬರೆದ . ವನವಾಸದ ವರ್ಣನೆಯಲ್ಲಿ ಅವ  ಅಯೋಧ್ಯೆ ಮರೆತುಬಿಟ್ಟ .  ಹಾಗಾಗಿಯೇ ರಾಮನ ಜೊತೆ ಸಾಗಿದ ಸೀತೆ ನಮಗೆ ಲೋಕಮಾನ್ಯಳು  , ಅಣ್ಣನ ಸೇವೆ ಮಾಡಿದ ಲಕ್ಷ್ಮಣ ಸೋದರ ಪ್ರೇಮಕ್ಕೆ ಉದಾತ್ತ ಉದಾಹರಣೆ . ಆದರೆ ...... ಅವ  ಬಿಟ್ಟು ಬಂದ   '' ಊರ್ಮಿಳೆ '' ?  ಏನಾದಳೋ ನಮಗೆ ಬೇಕಿಲ್ಲ . ಹೌದು , ಯಾರೀ ಊರ್ಮಿಳೆ ????????